ಹೆಪ್‍ಬರ್ನ್, ಕ್ಯಾತರೀನ್
1907-. ಪ್ರಸಿದ್ಧ ಹಾಲಿವುಡ್ ಚಿತ್ರನಟಿ. ತನ್ನ ಆಕರ್ಷಕ ಅಭಿನಯ ಹಾಗೂ ಮೋಹಕದನಿ ಮಾಧುರ್ಯದಿಂದ ಚಿತ್ರರಸಿಕರ ಮನಸೂರೆಗೊಂಡ ಈಕೆ ಜನಿಸಿದ್ದು ಕನೆಕ್ಟಿಕಟ್‍ನ ರಾಜಧಾನಿ ಹಾರ್ಟ್‍ಫೋರ್ಡ್‍ನಲ್ಲಿ ಲುಡ್‍ಲೊ ಓಗ್‍ಡನ್ ಸ್ಮಿತ್ ಎಂಬಾತನ್ನು ಮದುವೆಯಾಗಿ ಅನಂತರ ವಿಚ್ಛೇದನ ಪಡೆದಳು. ಎ ಬಿಲ್ ಆಫ್ ಡೈವೋರ್ಸ್‍ಮೆಂಟ್ (1932) ಈಕೆಯ ಮೊದಲ ಚಿತ್ರ. ಅನಂತರ ಈಕೆ ಸುಮಾರು 40ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಹನ್ನೆರಡು ಬಾರಿ ಆಸ್ಕರ್ ಪ್ರಶಸ್ತಿಗಾಗಿ ನಾಮಕರಣಗೊಂಡು, ನಾಲ್ಕು ಬಾರಿ ಪ್ರಶಸ್ತಿಗಳಿಸಿದಳು. ನಾಲ್ಕು ಬಾರಿ ಆಸ್ಕರ್ ಪ್ರಶಸ್ತಿ ಪಡೆದ ಏಕೈಕ ನಟಿ ಎಂಬ ಕಾರಣಕ್ಕಾಗಿ ಗಿನ್ನಿಸ್ ಬುಕ್‍ನಲ್ಲಿ ಈಕೆಯ ಹೆಸರು ದಾಖಲಾಗಿದೆ. ಮಾರ್ನಿಂಗ್ ಗ್ಲೋರಿ (1933), ಗೆಸ್ ಹು ಈಸ್ ಕಮಿಂಗ್ ಟು ಡಿನರ್ (1967), ದಿ ಲಯನ್ ಇನ್ ವಿಂಟರ್ (1968), ಆನ್ ಗೋಲ್ಡನ್ ಪಾಂಡ್ (1981) - ಇವು ಈಕೆಗೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಚಿತ್ರಗಳು. ಗಂಭೀರ ಪಾತ್ರಗಳನ್ನೂ ಹಾಸ್ಯ ಪಾತ್ರಗಳನ್ನೂ ಜೀವಂತಗೊಳಿಸುವ ಕಲೆಗಾರಿಕೆ ಇವಳಲ್ಲಿತ್ತು. ಆಡಮ್ಸ್ ರಿಬ್ (1949), ಪ್ಯಾಟ್ ಅಂಡ್ ಮೈಕ್ (1952), ದಿ ಆಫ್ರಿಕನ್ ಕ್ವೀನ್ (1951) - ಇವು ಈಕೆ ನಟಿಸಿದ ಹಾಸ್ಯಚಿತ್ರಗಳು. ಕೊಕೊ (1969) ಎಂಬ ಸಂಗೀತ ಚಿತ್ರದಲ್ಲಿಯೂ ಈಕೆ ನಟಿಸಿದ್ದಳು. ಲಿಟಲ್ ವುಮನ್ (1933), ಸಮ್ಮರ್ ಟೈಮ್ (1955), ದಿ ರೇನ್ ಮೇಕರ್ (1956) - ಈ  ಚಿತ್ರಗಳಲ್ಲಿಯ ಈಕೆಯ ಅಭಿನಯ ಕೂಡ ಗಮನಾರ್ಹವಾದುದು. ರಂಗಭೂಮಿಯ ಬಗ್ಗೆಯೂ ಈಕೆಗೆ ಒಲವಿತ್ತು. ಹಾಸ್ಯ ನಾಟಕಗಳು ಹಾಗೂ ಷೇಕ್‍ಸ್ಪಿಯರ್ ನಾಟಕಗಳಲ್ಲಿ ಈಕೆ ಪಾತ್ರವಹಿಸಿದ್ದಳು.			
					*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ